Friday, 27 September 2013

ಕದನ

ಮತ್ತೆ ಮತ್ತೆ ಮೊಳಗುತಿದೆ ಗುಂಡಿನ ದಾಳಿ
ಶಾಂತಿಯ ಹೊದಿಕೆಯನ್ನು ಕಿತ್ತೆಸೆದು
ಎಲ್ಲೆಡೆ ಹರಿಯುತಿದೆ ನೆತ್ತರಿನ ಹೊಳೆಯು
ಜೀವಜಲವನನ್ನೇ ಬತ್ತಿಸುವಂತೆ
ಆವರಿಸಿದೆ ಎತ್ತಲೂ ಭಯದ ಹೊಗೆಯು

ಅಯ್ಯೋ, ಇದೇನಿದು?
ಪುಟ್ಟ ಮಗುವಿನ ಆಕ್ರಂದನ ಕೇಳಿಸುತಿದೆ
ಅದೋ, ಒಬ್ಬಾಕೆ ಅಲ್ಲಿ ಬಿದ್ದಿದ್ದಾಳೆ
ಬಾಂಬುಗಳ ಸದ್ದಿನಿಂದ ತಾನು
ಶಾಶ್ವತವಾಗಿ ಬಚಾವ್ ಆದೆನೆಂಬಂತೆ
ಅದ್ಯಾರೋ ದೂರದಲ್ಲಿ ಉಸಿರಾಡುತ್ತಿದ್ದಾರೆ ಕ್ಷೀಣವಾಗಿ
ಇನ್ನೆರಡು ಕ್ಷಣಗಳಲ್ಲಿ ಎಲ್ಲ ಕೊನೆಯೆಂಬಂತೆ

ಆತ ಯಾವುದೋ ಮೂಲೆಯ ಹಳ್ಳಿಯವನು
ದೇಶಸೇವೆಯೆಂಬುದು ಅವನ ಉಸಿರು
ಧೈರ್ಯ, ತ್ಯಾಗಗಳ ಮಹಾನ್ ಆತ್ಮವಿಂದು
ಅನಾಥ ಶವವಾಗಿ ಹೋಯಿತಲ್ಲ
ತನ್ನ ಮಗನನ್ನು ಕಳೆದುಕೊಂಡ
ತಾಯಿ ಭಾರತಿಗೆ ಅಳುವೂ ಬರುತ್ತಿಲ್ಲ
ಕಣ್ಣೀರಿಗೂ ಬರ ಬಂದಿತೇ?

ಅಗೋ, ರಾಜಧಾನಿಯಲ್ಲಿ ಹಾಯಾಗಿ
ಹವಾ ನಿಯಂತ್ರಿತ ಕೋಣೆಯಲ್ಲಿ ಕುಳಿತು
ತಮ್ಮ ಪದವಿ ಪ್ರತಿಷ್ಠೆಗಳ ಸಲುವಾಗಿ
ನಡೆಸಿದ್ದಾರೆ ಲಾಬಿ ಲೋಭಗಳನ್ನು
ಎಲ್ಲ ಮುಗಿದ ಮೇಲೆ ಇದ್ದೇ ಇದೆಯಲ್ಲ
ವಿಷಾದ ವ್ಯಕ್ತಪಡಿಸುವ ಕಾರ್ಯಕ್ರಮ
ಬರುತ್ತಾರೆ ನಮ್ಮ ಜನಪ್ರತಿನಿಧಿಗಳು

Wednesday, 18 September 2013

ಹನಿಗವನ

1.
ಖಾಲಿಯಾದವು ಕವನಗಳ ಬರೆದು
ಬಿಳಿಯ ಹಾಳಗಳೆಲ್ಲ
ಹೃದಯದ ಲೇಖನಿಯು ಹಾಳಾಗದಲ್ಲ
ಒಲವಿನ ಮಸಿಯೂ ಮುಗಿದಿಲ್ಲ

2.
ಕಪ್ಪು ಬಿಳುಪಿನ
ಈ ಕನಸುಗಳನ್ನು
ಬಣ್ಣಹಚ್ಚಿ ನನಸಾಗಿಸಲು
ಕುಂಚ ಹಿಡಿದು ಎಂದು ಬರುವನೋ
ನನ್ನ ಬಾಳ ಚಿತ್ರಕಾರ

3.
ಸಿಹಿ ಮುತ್ತನಿಡಲೇ
ಹುಸಿ ಪೆಟ್ಟುಕೊಡಲೇ
ಹೇಗೆ ತಿಳಿಹೇಳಲಿ
ನಲ್ಲ ನಿನಗೆ
ಹೃದಯದಲ್ಲಿ ಹತ್ತಿಕ್ಕಲಾಗದ
ನನ್ನ ಹುಚ್ಚು ಪ್ರೀತಿಯನ್ನು